Sunday, July 13, 2008

ಕಣ್ಣೀರ ಕಾವ್ಯ


ಈ ರಾತ್ರಿ ಕಣ್ಣೀರ ಕಾವ್ಯ ಬರೆಯುವೆನು
ರಾತ್ರಿ ನುಚ್ಚು ನೂರಾಯಿತೆಂದು
ದೂರದ ನೀಲಿ ನಕ್ಷತ್ರಗಳು ಛಳಿಗೆ ನಡುಗುತಿವೆಯೆಂದು
ಕಾರಿರುಳ ತಂಗಾಳಿ ಆಗಸದಿ ಸುಳಿದು ಸಂಗೀತವಾಯ್ತೆಂದು
ಈ ರಾತ್ರಿ ಕಣ್ಣೀರ ಕಾವ್ಯ ಬರೆಯುವೆನು.


ನಾನು ಅವಳನ್ನು ಪ್ರೀತಿಸಿದೆ.
ಅವಳೂ ನನ್ನನ್ನು ಪ್ರೀತಿಸಿದಳು.

ಇಂತಹುದೇ ರಾತ್ರಿಗಳ ಅನಂತ ಆಗಸದಡಿಯಲ್ಲಿ
ಅವಳನ್ನು ಬಿಗಿದಪ್ಪಿ ಮುತ್ತಿನ ಮಳೆಗೆರೆಯುತ್ತಿದ್ದೆ.

ಅವಳು ನನ್ನನ್ನು ಪ್ರೀತಿಸಿದಳು. ಆಗಾಗ ನಾನೂ ಕೂಡ.
ಅವಳ ನಿಶ್ಚಲ, ಬೊಗಸೆ ಕಣ್ಣುಗಳನ್ನು ಪ್ರೀತಿಸದವರು ಯಾರು?

ಈ ರಾತ್ರಿ ಕಣ್ಣೀರ ಕಾವ್ಯ ಬರೆಯುವೆನು
ನನಗಾಗಿ ಅವಳಿಲ್ಲವೆಂದು; ಅವಳನ್ನು ಕಳೆದುಕೊಂಡೆನೆಂದು.

ಅವಳಿಲ್ಲದ ರಾತ್ರಿಗಳ ಭೀಕರ ಏಕಾಂತದಲ್ಲಿ
ಹುಲ್ಲು ಹಾಸಿನ ಮೇಲೆ ಹಿಮಬಿಂದು ಜಾರಿದಂತೆ
ಕಣ್ಣೀರ ಈ ಕಾವ್ಯ ನನ್ನೆದೆಯ ಮೇಲೆ ಜಾರುತಿದೆ.

ನಾನವಳನ್ನು ಉಳಿಸಿಕೊಳ್ಳಲಿಲ್ಲ, ಹಾಗಾಗಿ
ನುಚ್ಚು ನೂರಾದ ಈ ರಾತ್ರಿ ಬದುಕು ಕಣ್ಣೀರ ಕಾವ್ಯವಾಯ್ತು.

ದೂ......ರ, ದೂರದಲ್ಲೆಲ್ಲೋ ಯಾರೋ ಹಾಡು ಹೇಳಿದಂತೆ
ಅವಳನ್ನು ಕಳೆದುಕೊಂಡ ನೋವು ಎದೆಯಾಳದಲಿ ಮೊಳಗುತಿದೆ.

ಅವಳಿಗಾಗಿ ನನ್ನ ಕಣ್ಣುಗಳು, ನನ್ನ ಹೃದಯ
ನಿರಂತರ ಹುಡುಕುತಿವೆ; ಅವಳು ನನ್ನೊಡನಿಲ್ಲವೆಂದು.

ಮರದ ಕೊಂಬೆಗಳ ಮಧ್ಯೆ ಆ ರಾತ್ರಿ ಬಾಡಿಹೋದ
ಕ್ಷಣದಿಂದಲೇ ನಾವು; ನಾವಲ್ಲ.

ನಿಜವಾಗಲೂ ನಾನವಳನ್ನು ಪ್ರೀತಿಸುತ್ತಿಲ್ಲ.
ಆದರೂ, ಅವಳನ್ನು ಎಷ್ಟು ಪ್ರೀತಿಸಿದ್ದೆನೋ!?
ನನ್ನ ಪಿಸುಮಾತಿನ್ನೂ ಅವಳೆಡೆಗೆ ಬೀಸುವ ಗಾಳಿಗಾಗಿ ಕಾಯುತ್ತಿವೆ.

ನಾನಿಟ್ಟ ಮುತ್ತುಗಳಂತೆ ಅವಳ ಮೈಮೇಲೆ ಯಾರಯಾರವೋ ಮುತ್ತುಗಳು!
ಅವಳ ದನಿ! ಅವಳ ದೇಹ ಸಿರಿ! ಅವಳ ಬೊಗಸೆ ಕಣ್ಣುಗಳು! ವಾಹ್!

ನಿಜವಾಗಲೂ ನಾನವಳನ್ನು ಪ್ರೀತಿಸುತ್ತಿಲ್ಲ.
ಏನೋ!? ಪ್ರೀತಿಸುತ್ತಿದ್ದೀನೇನೋ!?
ಪ್ರೀತಿ ಕ್ಷಣಿಕ: ನೋವಿನ ನೆನಪು ನಿರಂತರ.

ಇಂತಹುದೇ ರಾತ್ರಿಯಲ್ಲಿ, ತೋಳುಗಳಲ್ಲಿ ಬಳಸಿದ್ದೆ; ಹಾಗಾಗಿ
ಅವಳನ್ನು ಕಳೆದುಕೊಂಡ ನೋವು ಎದೆಯಾಳದಲಿ ಮೊಳಗುತಿದೆ.

ಇದೇ ಅವಳು ನನಗೆ ಮಾಡಿದ ತಾಜಾ ಗಾಯ
ಇದೇ ಅವಳಿಗಾಗಿ ನಾನು ಬರೆದ ಕೊನೆಯ ಕಾವ್ಯ.

[ಪ್ಯಾಬ್ಲೊ ನೆರುದ ತನ್ನ ಯೌವನದಲ್ಲಿ ಬರೆದ ಇಪ್ಪತ್ತು ಪ್ರಸಿದ್ಧ ಪ್ರೇಮ ಕವಿತೆಗಳಲ್ಲಿ ಒಂದು]


No comments: